ಬಾಸ್ವೆಲ್, ಜೇಮ್ಸ್
1740-95. ಇಂಗ್ಲಿಷ್ ಜೀವನ ಚರಿತ್ರಕಾರ. ಏಡಿನ್ ಬರೋದಲ್ಲಿ ಜನನ. ಅಲ್ಲಿಯ ಶಾಲೆಯಲ್ಲಿ ಓದಿದ ಈತ ಮುಂದೆ ಏಡಿನ್ ಬರೋ, ಗ್ಲಾಸ್‍ಗೋ, ಯುಟ್ರೆಚ್ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿದ. ಇಷ್ಟವಿಲ್ಲದೆ ನ್ಯಾಯಶಾಸ್ತ್ರವನ್ನು ಓದಿ ಇಂಗ್ಲೆಂಡಿಗೆ ಬಂದ. ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಅನಾಮಧೇಯ ಹೆಸರಿನಲ್ಲಿ ಓಡ್ ಟು ಟ್ರ್ಯಾಜಿಡಿ ಎಂಬ ಪುಸ್ತಕವನ್ನು ಪ್ರಕಟಿಸಿದ. 1773ರಲ್ಲಿ ಲಂಡನ್ನಿನ ಪುಸ್ತಕದಂಗಡಿ ಒಂದರಲ್ಲಿ ಸ್ಯಾಮ್ಯುಯಲ್ ಜಾನ್‍ಸನ್ನನ ಪರಿಚಯವಾಯಿತು. 1773ರಲ್ಲಿ ಇಬ್ಬರೂ ಹೆಬ್ರಿಡೀಸ್‍ನ ಪ್ರವಾಸ ಕೈಗೊಂಡರು. 1785ರಲ್ಲಿ ಬಾಸ್ ವೆಲ್ ನ ಎ ಜರ್ನಲ್ ಆಫ್ ಎ ಟೂರ್ ಟು ದಿ ಹೇಬ್ರಿಡೀಸ್ (ಹೆಬ್ರಿಡೀಸ್ ಪ್ರವಾಸ) ಮತ್ತು 1791ರಲ್ಲಿ ಲೈಫ್ ಆಫ್ ಸ್ಯಾಮ್ಯುಯಲ್ ಜಾನ್‍ಸನ್ (ಸಾಮ್ಯುಯಲ್ ಜಾನ್‍ಸನ್‍ನ ಜೀವನಚರಿತ್ರೆ) ಪ್ರಕಟಣೆಗೊಂಡುವು. ಇದು ಇಂಗ್ಲಿಷ್ ಭಾಷೆಯಲ್ಲಿ ಅತಿ ಶ್ರೇಷ್ಠ ಜೀವನ ಚರಿತ್ರೆ ಎಂದು ಪ್ರಸಿದ್ಧವಾಗಿದೆ. ಜಾನ್‍ಸನ್ ರೇನಾಲ್ಡ್ಸ್ ಬರ್ಕ್, ಗೋಲ್ಡ್ ಸ್ಮಿತ್ ಮುಂತಾದ ಪ್ರತಿಭಾವಂತರು ರೂಪಿಸಿದ್ದ ಲಿಟರರಿ ಕ್ಲಬ್‍ನ ಸದಸ್ಯನಾದ. 1857ರಲ್ಲಿ ಈತನ ಪತ್ರಗಳು ಪ್ರಕಟಗೊಂಡುವು. 

	ಈತ ಜಾನ್‍ಸೆನ್‍ನನ್ನು ಕಾಣುವುದಕ್ಕಿಂತ ಮೊದಲೇ ಅವನಲ್ಲಿ ವಿಶೇಷವಾದ ಗೌರವ ಭಾವನೆಯನ್ನು ಬೆಳೆಸಿಕೊಂಡಿದ್ದ. ಬಾಸ್‍ವೆಲ್ ಹಲವು ಮೂಲಗಳಿಂದ ಸಾಮಗ್ರಿ ಶೇಖರಿಸಿದ್ದ. 1772ರಲ್ಲಿಯೇ ಜಾನ್‍ಸನ್ನನಿಗೆ ತನ್ನ ಉದ್ದೇಶ ತಿಳಿಸಿದ. ಅವನ ಜೊತೆಯಲ್ಲಿದ್ದಾಗ ಟಿಪ್ಪಣಿಗಳನ್ನು ಗುರುತು ಹಾಕಿಕೊಂಡು, ಅವನ ಅಭಿಪ್ರಾಯ ಮತ್ತು ತೀಕ್ಷ್ಣ ಬುದ್ಧಿಶಕ್ತಿಗಳನ್ನು ಹೊರತರಲು ತಾನೇ ಸನ್ನಿವೇಶಗಳನ್ನೂ ಸೃಷ್ಟಿಸಿದ. ಬಾಸ್‍ವೆಲ್ ಪ್ರತಿಭಾವಂತನಲ್ಲ, ಅದರೂ ಹಲವು ಗುಣಗಳು ಅವನಿಗೆ ಯುಶಸ್ಸನ್ನು ತಂದವು. ಶ್ರದ್ಧೆ, ಅಸಾಧಾರಣ ಜ್ಞಾಪಕ ಶಕ್ತಿ, ವಿವರಗಳನ್ನು ಗಮನಿಸುವ ದೃಷ್ಟಿ ಮತ್ತು ತಾನು ಹಿನ್ನಲೆಯಲ್ಲಿ ಉಳಿಯುವ ಪ್ರವೃತ್ತಿ. ಬಾಸ್‍ವೆಲ್ ಆ ತನಕ ಪ್ರಕಟವಾಗುತ್ತಿದ್ದ ಜೀವನ ಚರಿತ್ರೆಗಳ ಮಾದರಿ ಅನುಸರಿಸಿದುದಲ್ಲದೆ ಅದರೊಂದಿಗೆ ಕಿರುಗತೆಗಳನ್ನು ಸೇರಿಸಿ ಹೊಸತಂತ್ರವನ್ನು ರೂಪಿಸಿದ. ಈತ ಜಾನ್‍ಸನ್ನನ ಶ್ರೇಷ್ಠ ಗುಣಗಳನ್ನು ಹೇಳುವುದರ ಜೊತೆಗೆ ಅವನ ದೋಷಗಳನ್ನೂ ಹೇಳಿದ್ದಾನೆ. ಹೀಗಾಗಿ ಪ್ರತಿ ಪುಟಗಳಲ್ಲೂ ಜಾನ್‍ಸನ್ನನ ರೂಪ, ಧ್ವನಿಗಳೇ ಕಾಣುವಂತೆ ಮಾಡಿದ್ದಾನೆ. 

	ಜಾನ್‍ಸನ್ನನನ್ನು ಬಾಸ್‍ವೆಲ್ ಭೇಟಿ ಮಾಡಿದಾಗ ಜಾನ್‍ಸನ್ನನಿಗೆ 54 ವರ್ಷ. ಅನಂತರದ 21 ವರ್ಷಗಳಲ್ಲಿ ಅವರಿಬ್ಬರೂ ಒಟ್ಟಿಗೆ ಇದ್ದುದು 270 ದಿನಗಳು. ಆದರೂ ಜಾನ್‍ಸನ್‍ನ ಸಮಗ್ರ ಮತ್ತು ಅವನ ವ್ಯಕ್ತಿತ್ವದ ಸಂಪೂರ್ಣ ಪರಿಚಯವನ್ನು ಮಾಡಿಕೊಡುವುದರಲ್ಲಿ ಬಾಸ್‍ವೆಲ್ ಯಶಸ್ವಿಯಾಗಿದ್ದಾನೆ. ಈ ಜೀವನ ಚರಿತ್ರೆಯನ್ನು ಬಿಟ್ಟು ಈತನ ಉಳಿದ ಕೃತಿಗಳಲ್ಲಿ ಸತ್ವವೇನೂ ಇಲ್ಲ. ಬಾಸ್‍ವೆಲ್‍ನಿಂದ ಜಾನ್‍ಸನ್ನನ ವ್ಯಕ್ತಿತ್ವ ಉಳಿದುಬಂದಂತೆ ಜಾನ್‍ಸನ್‍ನಿಂದ ಬಾಸ್‍ವೆಲ್‍ನ ಹೆಸರು ಉಳಿಯಿತೆನ್ನುವುದೂ ಸತ್ಯ. 										(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ